ಧರ್ಮಪಾಲ 2 -
ಕ್ರಿ. ಶ. 11 ನೆಯ ಶತಮಾನದಲ್ಲಿ ಸುವರ್ಣ ದ್ವೀಪದಲ್ಲಿದ್ದ (ಸುಮಾತ್ರ) ಪ್ರಸಿದ್ಧ ಆಚಾರ್ಯ.  ಎಂಬತ್ತುನಾಲ್ಕು ಬೌದ್ಧಸಿದ್ಧರಲ್ಲಿ ಒಬ್ಬನಾದ ಮತ್ತು ಕಲಿಕಾಲಸರ್ವಜ್ಞನೆಂಬ ಬಿರುದನ್ನು ಪಡೆದಿದ್ದ ರತ್ನಾಕರ ಶಾಂತಿ, ವೈಚಾರಿಕ ತರ್ಕವನ್ನು ಬೆಳೆಸಿದ ಜ್ಞಾನಶ್ರೀ ಮಿತ್ರ ಮತ್ತು ರತ್ನಕೀರ್ತಿ - ಇವರು ಧರ್ಮಪಾಲನ ಶಿಷ್ಯರು.  ಸುವರ್ಣ ದ್ವೀಪ ಬೌದ್ಧ ಧರ್ಮಕ್ಕೆ ಭಾರತ ಮತ್ತು ಚೀನ ದೇಶಗಳಷ್ಟು ಪ್ರಸಿದ್ಧವಲ್ಲದಿದ್ದರೂ ಧರ್ಮಪಾಲ ಅಲ್ಲಿದ್ದ ಕಾರಣ ಅದು ಚೀನ ಮತ್ತು ಭಾರತಗಳ ಬೌದ್ಧ ವಿದ್ವಾಂಸರ ಗಮನ ಸೆಳೆಯಿತು.  ವಿಕ್ರಮಶೀಲ ವಿಹಾರದ ಅಧ್ಯಕ್ಷನಾಗಿದ್ದ ದೀಪಂಕರ ಶ್ರೀಜ್ಞಾನ ಟಿಬೆಟ್ಟಿನಲ್ಲಿ ಬೌದ್ಧ ಮತ ಪ್ರಚಾರವನ್ನು ಕೈಕೊಳ್ಳುವುದಕ್ಕೆ ಮುಂಚೆ ಧರ್ಮಪಾಲನಿಂದ ತನ್ನ ಜ್ಞಾನವನ್ನು ವೃದ್ಧಿಗೊಳಿಸಿಕೊಳ್ಳಬಯಸಿ ಕ್ರಿ. ಶ. 1013 ರ ಸುಮಾರಿನಲ್ಲಿ ಗಯಾ ಮತ್ತು ತಾಮ್ರಲಿಪ್ತಿಗಳ ಪ್ರವಾಸ ಮುಗಿಸಿ ಸುವರ್ಣದ್ವೀಪಕ್ಕೆ ಹೋಗಿ ಧರ್ಮಪಾಲನಿಂದ ಬೌದ್ಧಮತ ಪ್ರಚಾರ ವಿಧಾನಗಳನ್ನು ತಿಳಿದುಕೊಂಡು ಟಿಬೆಟ್ಟಿಗೆ ಹೋದ .  ಧರ್ಮಪಾಲನ ಪ್ರಸಿದ್ಧಿ ಅಷ್ಟರಮಟ್ಟಿನದು.
(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ